Tuesday, September 24, 2019

ನನ್ನ ಅಜ್ವ - ನವಲೂರು ಶಾಲೆ ಮಾಸ್ತರ್ : ದಿನಚರಿ ೨


ಅವತ್ತು ಮಂಗ್ಳಾರ (  ಮಂಗಳವಾರ- Tuesday)..., ಮಂಗ್ಳಾರ ಅಂದ್ರ ಸಂತಿ ದಿನ. ನವಲೂರಿಗೆ ಬರೋ ಬಸ್ಸು ಎಲ್ಲಾ ತುಂಬಿ ತುಳ್ಕಾಕತ್ತಿರ್ತಾವ. ಎಲ್ಲಾ ಊರ ಮಂದಿ ಧಾರವಾಡಕ್ಕ ಹೋಗಿ ಸಂತಿ ಮಾಡಿಕೊಂಡು ಬರೋರು.
ಅದರಾಗ ಅವತ್ತ ತಾರಿಖು ೨ , ನನ್ನ ಅಜ್ಜಾಗ ಪೆನ್ಷನ್ ದಿನ. ನಡಿಲೇ ಸುನಿ ಇವತ್ತ ಧಾಡ್ಕ (ಧಾರವಾಡಕ್ಕ - ಆಡು ಭಾಷೆ ) ಹೋಗುಣು ಅಂದ್ರು ನನ್ನ ಅಜ್ಜಾ.
ಅಬ್ಬಾ ಇಂದ ಧಾಡ್ದಾಗ ಚೈನಿ ಹೊಡಿಯುದು ಅನ್ನೊ ಖುಶಿ. ಜಳಕಾ ಮಾಡಿ, ನಾಷ್ಟಾ ಮಾಡಿ ನಾ ಲಗೂನ ತೈಯ್ಯಾರ್ ಆಗಿ ಕುಂತೆ. ನಮ್ಮ ನವಲೂರಿಗೆ ಅರ್ಧಾ ತಾಸಿಗೆ ಒಮ್ಮೆ ಬಸ್ಸು ಬರ್ತದ. ನಾ ತೈಯಾರ್ ಆಗಿದ್ದಾಗ ಒಂಬತ್ತು ಒರಿ, ಮನಿ ಅಟ್ಟದಾಗಿಂದ ನೋಡಿದೆ ಆಗಲೇ ಬಸ್ಸು ಬಂದು ಹೋಗ್ಯದ ಅಂತ ತಿಳಿತು. ಇನ್ನ ಮುಂದಿನ ಬಸ್ಸು ೧೦ ಕ್ಕ. 
ಅಜ್ಜಾ ತನ್ನ ಕೈಯ್ಯಾಗ ಪರ್ಸ್ ತೊಗೊಂಡು ಬಗಲಾಗ ಹಿಡಕೊಂಡಾ..,ನಾನು ಕೈಚೀಲನ್ ಕೈಯಾಗ ಸುತ್ತಿಕೊಂಡು ಅಜ್ಜಾನ ಜೋಡಿ ಹೊರಟೆ. ನಾವು ನಾಕ್ ಹೆಜ್ಜಿ ಇಟ್ಟಿರಲಿಲ್ಲಾ.., ಶೆಟ್ಟರ ಅಂಗಡಿ ಮುಂದ ಹೊರಟಿದ್ದವಿ.., ಶೆಟ್ಟರು....ನಮಸ್ಕಾರ್ ರೀ ಮಾಸ್ತರ್ , ಸಂತಿ ಮಾಡಾಕ ಧಾಡ್ಕ ಹೊಂಟ್ರಿ ? ಅಂದ್ರು, ನಮಸ್ಕಾರ್ ..., ಹೌದು, ಹಂಗ ಬ್ಯಾಂಕಿಗೆ ಹೋಗಿ, ಸಂತಿ ಮಾಡ್ಕೊಂಡು ಬರ್ತೀನಿಪಾ. ಅಯ್ಯೊ ಮಾಸ್ತರ ಈಗ ಒಂಬತ್ತರ ಬಸ್ಸ್ ಹೋತಲ್ರಿ...ಅಂದರು. ೧೦ ರ ಬಸ್ಸಿಗೆ ಹೋದ್ರಾತು ಬಿಡ್ಪಾ.... ಅಂದ್ರು. ಅರ್ಧಾ ತಾಸ್ ಕಳದ್ ಮ್ಯಾಗ ಸಿಬಿಟಿ ನವಲೂರು ಬಸ್ಸು ಬಂತು.
ಹಳ್ಳಿ ಬಸ್ಸ್ಟಾಂಡ್ನ್ಯಾಗ ಕಂಡಪಟ್ಟೆ ಜನ..., ಗದ್ಲದಾಗ ಬಸ್ಸು ಹತ್ತೋದ ಕಷ್ಟ ಆತು, ಹೆಂಗೋ ಮಾಡಿ ಬಸ್ಸು ಹತ್ತಿದ್ವಿ. ಡೈವರ್..., ನಮಸ್ಕಾರ ರೀ ಮಾಸ್ತರ್ ದಾಡ್ಕ ಹೊಂಟ್ರಿ...?? ಹುನ್ಪಾ..., ತಗೋ ಸ್ವಲ್ಪ ಮೊಮ್ಮಗಂಗ ನಿನ್ನ ಸೀಟಿನ ಬಾಜುಕ ನಿಂದ್ರಸ್ಕೋ..., ಇಲ್ಲೇ ಬರ್ರಿ ಮಾಸ್ತರ... ಇದರ ಮ್ಯಾಲ ಕುಂಡರ್ರೀ ಅಂದ ಗಾಡಿದ ಬಾನೆಟ್ ಮ್ಯಾಗ ಕೂಡಸಿದಾ ಡ್ರಿವೆರ್.  ಅಂತು ಇಂತು ಬಸ್ಸು ಧಾಡ್ಕಡೆ ಹೊಂಟತು.
ಧಾರ್ವಾಡ ಕೋರ್ಟ ಸರ್ಕಲ್ ನ್ಯಾಗ ಇಳದ ಬ್ಯಾಂಕಿನ ಕಡೆ ನಡಕೊಂಡು ಹೊರಟವಿ. ನನ್ನ ತಲ್ಯಾಗ ಮತ್ತ ಅದೇ ಪ್ರಶ್ನೇ ಬಸ್ಸು ಡ್ರೈವರ್, ಕಂಡೆಕ್ಟರ್, ಹೋದ್ ಹೋದ್ ಕಡೆ ಎಲ್ಲಾರೂ ನಮಸ್ಕಾರ ಮಾಡವ್ರು, ಏನ್ಪಾ ನನ್ನ ಅಜ್ಜಾ ಭಾರಿ ಪೇಮಸ್ ..! ಎಲ್ಲಾ ಅಜ್ಜಾ ಅಜ್ಜಿಗಳು ಬ್ಯಾಂಕನ್ಯಾಗ ಪೆಸ್ಷನ್ ಸಮಂಧ ಕಾಯಾಕತ್ತಿದ್ದ್ರು. ಅಯ್ಯೊ ಸುನಿ, ಏನ್ಲೇ ಪಾ ಭಾರಿ ಗದ್ಲಾ ಐತಿ...ತಡಿ ಬ್ಯಾಂಕ್ ಮ್ಯಾನೇಜರ್ ನೋಡಿಕೊಂಡು ಬರೂಣು ಅಂತ ಹೇಳಿ ಅವರ ಕೊಟ್ಟಡಿಗೆ ಹೋದವಿ. ಬರ್ರಿ ಮಾಸ್ತರ್ ಕೂಡ್ರಿ..., ಏನು ಮೊಮ್ಮಗಾನೂ ಕರ್ಕೊಂಡು ಬಂದ್ರಿ.? ಕುಶಲೋಪರಿ ವಿನಿಮಯ ಆಯ್ತು. ಸ್ವಲ್ಪ ರೊಕ್ಕಾ ತಗಸಬೇಕಿತ್ತು...ಹೊರಗ ಗದ್ಲ ಬಾಹಳ ಐತಿ...ಹ್ಮ್ ಹೌದ್ರಿ ಸಂತಿ ಇವತ್ತ ಮತ್ತ ತಿಂಗಳ ಕೊನೆ ಅದಕ್ಕ..., ನೀವು ಇಲ್ಲೇ ಕೂಡ್ರಿ.., ಹಂಗ ನಿಮ್ಮ ಪಾಸ್ಬುಕ್ ಕೊಡ್ರಿ ಅಂದ್ರು..ಅಜ್ಜಾ ಕೊಟ್ಟಾ. ಒಂದು ಹಣ ತೆಗಿಯೋ ಚೀಟಿ ಬರೆದುಕೊಟ್ಟು ಕಳಿಸಿದರು. ಸ್ವಲ್ಪ ಹೊತ್ತಿನ್ಯಾಗ ಮ್ಯಾನೇಜರು ರೊಕ್ಕಾ ತಂದು ಕೊಟ್ಟರು.

ಮುಂದ ಮಾರ್ಕೇಟ್ ಗೆ ಹೊಂಟ್ವಿ..., ಎಪ್ಪಾ ಸುನಿ ಬಹಳ ಬಿಸಿಲ ಐತಿ, ತಲಿ ಸುಡಾಕತ್ತದ.., ಬಾ ಇಲ್ಲೇ ಕಬ್ಬಿನ ಹಾಲು ಕುಡಿದು ಹೋಗೂಣು ಅಂದ್ರು. ಆಹಾ...!! ಏನ್ ರುಚಿಯಿತ್ತು ಅಂತೀರಿ...?!
ಮತ್ತ ಸಂತಿ ಪ್ಯಾಟ್ಯಾಗ ತರ್ಕಾರಿ ಹಣ್ಣು ಹಂಪ್ಲಾ ತೊಗೊಂಡು ಸಿಬಿಟಿಗೆ ಬಂದಾಗ ಮಧ್ಯಾನ ಎರಡು ಘಂಟೆ ಆಗಿತ್ತು. ಊಟದ ಹೊತ್ತು ಆಗಿದ್ದರಿಂದ ಬಸ್ಸು ಅಷ್ಟೇನು ಗದ್ಲ ಇರಲಿಲ್ಲ. ಮನಿಗೆ ಬಂದಾಗ ಮೂರ್ ಆಗಿತ್ತು.. ಊಟಾ ಮಾಡಿದವರ ಗಡತ್ತಾಗಿ ನಿದ್ದಿ ಹೊಡದ್ವಿ ನೋಡ್ರಿ....! ಸಂತಿ ದಿನಾ ಅಂದ್ರ ಹಿಂಗ ಅಡ್ಯಾಡಿ ಅಡ್ಯಾಡಿ ಸುಸ್ತಾಗಿ ಮನಿಗೆ ಬರೂದು, ಬಂದು ಊಟಾ ಮಾಡಿ ಮಕ್ಕೋಳುದು.

ಮತ್ತೊಂದು ದಿನಚರಿದೊಂದಿಗೆ ಭೇಟಿ ಆಗೋಣ....!! :)

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...