Tuesday, July 30, 2019

ಸಿಡಿದೆದ್ದ ಪ್ರಜೆ

ಸಾಕು ಸಾಕಾಯಿತು

ರಾಜಕೀಯ ಡೊಂಬರಾಟ

ಪಕ್ಷ ಪಕ್ಷದ ನಡುವೆ

ಕುತಂತ್ರ ಕಾದಾಟ

ಒಳಿತಿಲ್ಲ, ಅಳಿವಿಲ್ಲ
ಇವರ
ಹುಚ್ಚಾಟಕೆ ಕೊನೆಯಿಲ್ಲ

ಬೇಸತ್ತ ಪ್ರಜೆ
ಬೇಡವಾಗಿದೆ
ಯಾರಿಗೂ ಈ ಸಜೆ

ಬದಲಾವಣೆ ಅವತರಿಸಲಿ
ಪ್ರಜೇಗಳೇ ಪ್ರಭುಗಳಾಗಲಿ
ರಾಜಕೀಯ ನಶಿಸಲಿ, ಪ್ರಜಾಕೀಯ ಪ್ರಜ್ವಲಿಸಲಿ.

Monday, July 29, 2019

ನನ್ನ ಅಜ್ವ - ನವಲೂರು ಶಾಲೆ ಮಾಸ್ತರ್

ನಮ್ಮ ಅಜ್ಜ ನವಲೂರ ಸಾಲಿ ಮಾಸ್ತರ್. ಅಜ್ಜಾಂದು ನಂದು ಭಾರಿ ನಂಟು. ನನಗ ಸಾಲಿ ಸೂಟಿ ಸುರು ಆತು ಅಂದ್ರ ಮರದಿನಾ ನಾ ಅಜ್ಜಾನ ಊರ ನವಲೂರಿಗೆ ಹೋಗ್ತಿದ್ದೆ. ಅಲ್ಲಿಗೆ ಹೋದ ಮ್ಯಾಲ, ಅವರ ಜೋಡಿನ ಎಲ್ಲಾ, ಆಡುದು, ಓದುದು, ವಾಯುವಿಹಾರಕ್ಕ ಹೋಗುದು, ಉಣ್ಣುದು, ಮಲಗೂದು. ನನ್ನ ಅಜ್ಜ ಲೇ ಸುನಿ, ಬೇಗ ಏಳೋ ಇವತ್ತ ನಾವ್ ಹೊಲದ ಕಡೆ ಹೋಗುಣು ಅಂತ ಕೂಗಿದರೆ ನಂಗ ಎಲ್ಲಿಲದ ಖುಷಿ. ಬಡಾ ಬಡಾನ ಎದ್ದು, ಮುಖ ತೊಳದ, ಜಳಕಾ ಮಾಡಿ ತೈಯಾರ. ಅಜ್ಜಾ ಬೇಗ ನಡಿ ಹೋಗುಣ ಹೊಲಕ್ಕ ಅಂತ ನಾ ಅಂದ್ರ ತಡಿ ಪಾ ನಾಸ್ಟಾ ಮಾಡಿ ಚಾ ಕುಡದ ಹೋಗುಣು ಅಂತಿದ್ದರು. ಸರಿ ಎಲ್ಲಾ ಮುಗಿಸಿ ಅಜ್ಜಾ ಮೊಮ್ಮಗನ ಸವಾರಿ ಹೊರ್ಟರ ಶುರು ನೋಡ್ರಪಾ..., ನಮಸ್ಕಾರೀ ಮಾಸ್ತರ..., ಮುಂಜಾಲೆನೆ ಎಲ್ಲಿಗ ಹೊಂಟ್ರಿ.., ಮೊಮ್ಮಗಾ ಬಂದಾನ ಹಂಗ ಹೊಲದ್ ಕಡೆ ಹೋಗ ಬರ್ತೀನಿ. ಬರ್ರಿ ಬರ್ರಿ ಹೋಗಬರ್ರಿ..ಇನ್ನ ಎರಡು ಹೆಜ್ಜಿ ಇಟ್ಟರಲಿಲ್ಲ ..ಶರಣರೀ ಮಾಸ್ತರ್.., ಚಾಹಾ ಆತರೀ ?? ಅಂತ ಒಬ್ಬ ಅಜ್ಜಿ ಮಾತನಾಡಿಸಿದರು. ಹೂನ್ವಾ...ಈಗ ಇನೈದ ಆತ ನೋಡ, ಸ್ವಲ್ಪ ಹೊಲಕ್ಕ ಹೋಗಬರ್ತೀನಿ..ಅಂದರು. ನವಲೂರು ವ್ಯಾಯಾಮ ಸಾಲಿ ಮುಂದ ಪೈಲ್ವಾನರು ನಮಸ್ಕಾರ  ಮಾಸ್ತರ ಅಂದ್ರು...ಓಹೋ ಪೈಲವಾನ  ಅರಾಮೇನರ್ಪಾ...? ಎಲ್ಲಾರೂ ವ್ಯಾಯಾಮ ಮುಗಿಸೇ ಕುಂತಿರೇನು ಅಂದ್ರು.. ಹೂನ್ರೀ ಅಂದ್ರು.  ಮನಿಯಿಂದ ಅಗಸಿ ದಾಟಿ ಹೊಲದ ರಸ್ತೆ ಹಿಡಿಯು ಮಟ ಇಷ್ಟೊಂದು ಮಂದಿ ನಮ್ಮ ಅಜ್ಜಾಗ ಹೆಂಗ ಗೊತ್ತ ಅದಾರ....? ಅಜ್ಜಾ ನಿಂಗ ಈಸ್ ಮಂದಿ ಹೆಂಗ ಗೊತ್ತ ಅದಾರ...?  ನಮ್ಮ ಸಾಲ್ಯಾಗ ಇವರ ಮಕ್ಕಳು ಕಲಿತಾರ, ಇವರು ಸಾಲಿಗೆ ಹಚ್ಚಾಕ ಬರ್ತಾರ ಅದಕ್ಕ ತಿಳಿದಿರ್ತಾರ.  ಹಿಂಗ ನಾವು ಹೊಲ ಮುಟ್ಟೋತನಕಾ ಸಿಕ್ಕವರು ಬಹಳ ಮಂದಿ...., ನನ್ನ ಅಜ್ಜಾ ಭಾರಿ ಫೇಮಸ್ ಅಂತ ನನಗ ಆಶ್ಚರ್ಯ ಹಾಗು ಖುಷಿ. 
ಮತ್ತೋಂದು ದಿನಚರಿಯೊಂದಿಗೆ ಭೇಟಿಯಾಗೋಣ...

Thursday, July 25, 2019

ನಮ್ಮ ಕನಸ್ಸು

ಒಡಲು ತುಂಬಿ
ಮೂರರಲ್ಲಿ
ಸಂತೋಷ ಹೊಮ್ಮಿ
ಮನಗಳಲ್ಲಿ
ಚಿಗುರಿದೆ ಹೊಸ ಕನಸ್ಸುಗಳು !

ಇನಿಯನ ನೆನಪು
ಎದೆಯ ತುಂಬ
ಬಯಸಿದೆ ಸನಿಹ
ಅನುದಿನ ಅನುಕ್ಷಣ
ಬಣ್ಣ ಬಣ್ಣದ ಚಿತ್ತಾರಗಳು !

ಮಳೆಯ ಹನಿ ಹನಿಯಲ್ಲೂ
ನಲ್ಲನ ಸವಿ ತಂಪು
ಕುಹೂ ಕುಹೂ ಕೂಗಿನಲ್ಲೂ
ಅವನ ಗುಣುಗು
ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು !

ಘರ್ಬದಿ ಆಡುವ
ನವಜಾತಕೆ
ಮೈಯೆಲ್ಲಾ ರೋಮಾಂಚನ
ಅದರ ಒಳ ಜಿಗಿದಾಟಕೆ
ಅವರಂತೆ ಅವನೋ.. ? ನನ್ನಂತೆಯೇ ಅವಳೋ !

ಮಾಸಗಳು ಕಳೆಯುತ್ತ..
ಇಂದಿಗಿಂದು ಒಂಬತ್ತು...
ಘರ್ಬದಿ ಮೊಳಗಿದ ಮೇಳ
ಕೈಗಳಲಿ ಕುಣಿಯುವ ಹೊತ್ತು
ಆರತಿಯೂ ಸರಿಯೇ, ಕೀರತಿಯೂ ಸರಿಯೇ !

ಹರುಷದಿ ಕಾಣುವ
ಜಗವೆಲ್ಲಾ ಹಸಿರು
ಬೆರಳಂಚಿನ ಎಣಿಕೆ
ಆಗಮನಕ್ಕೆ ಕಾಯುತ್ತಿರುವೆ
ಎನ್ನ ತೋಳಲಿ ನಗುವ ಕಂದನಿಗೆ !






Tuesday, July 23, 2019

ಹೊಡಿಲಿಕತ್ರ ಮಳಿ

ಹೊಡಿಲಿಕತ್ರ ಮಳಿ
ಜನರು ಓಡೋಡಿ ಚಿಲ್ಲಾಪಿಲ್ಲಿ
ರಸ್ತೆಯಲ್ಲಾ ತ್ಯವಸಗಟ್ಟಿದ ದಾರಿ
ನಡಕ್ಕ ಓಡೈತಿ ಬಿಆರ್ಟಿಎಸ್ ಚಿಗರಿ
ಟೋಲ್ನಾಕಾ ನೀರ ನೋಡಿ ನಿಂತೇತಿ ಹೆದರಿ
ಗಟರ್ನ್ಯಾಗ ನೀರ್ ಹೋಗವಲ್ತರೀ
ಜನ ಬಳಸಿ ಚೆಲ್ಲಿದ ಪ್ಲಾಸ್ಟಿಕ್ ತಡದೇತ್ರೀ
ಇದು ನಮ್ಮ ಢಾರವಾಡದ ಚಿಂತಾಜನಕ ಸ್ಥಿತಿರೀ
ಹಣೆಬರಹ ಬದಲಿಸಾಕ ಯಾರ್ ಯಾರ್ ಬರ್ತೀರಿ ???

Wednesday, July 10, 2019

ವಿ....ನಯ !

ಮಾತು ಪಟ ಪಟ
ಕಲಸ ಚಟ ಚಟ

ಗೆಳೆಯರು ಬಹಳ
ಗೆಳೆತನವೂ ಆಳ

ವೇಳೆಯ ಮಹತ್ವ
ತಿಳಿದ ಮಹಾತ್ಮ

ಗಡಿಯಾರ ಮೋಹ
ಮಧು ಪಾನ ಪ್ರೀಯ

ಹೆಸರು ವಿನಯ
ಹಾಸ್ಯದಲ್ಲಿ ತಲ್ಲೀನ

ವಾಕ್ ಚತುರ
ಮೋಡಿಗಾರ

ಕೀಟಲೆ ಮಾಡವ ಪ್ರವೀಣ
ಸದಾ ಹಸನ್ಮುಖಿ..,
ಹೃದಯವಂತ ಜಾಣ !!

Tuesday, July 09, 2019

ತಂತ್ರಜ್ಞಾನ

ಕೂಡುತ್ತಿದ್ದರು ಜನರು

ನೋಡಲು ಕ್ರಿಕೇಟು

ಟೀವಿಯ ಮುಂದೆ....!

ಈಗ ಎಲ್ಲರ ಕೈಯಲ್ಲೂ

ಮೋಬೈಲು...

ಟೀವಿಯೇ., ಕಣ್ಣ ಮುಂದೆ...!!

Monday, July 08, 2019

ಕವಿಯ ಲೇಖನಿ

ಕ್ರಾಂತಿಯ ಸಮರ
ಆದರೂ ಮೌನಿ
ಅರಿಯಿರಿ ಸಾರ
ಅದು ಶಾಂತ ವಾಹಿನಿ
ಹರಿಸಿದೆ ಬೆವರ..,ಕವಿಯ ಲೇಖನಿ !

ಗುಡು-ಗುಡುಗಿದವರ
ಹುಟ್ ಅಡಗಿಸುವ ಹನಿ
ಹುಚ್ಚೆದ್ದು ಅಬ್ಬರಿಸಿದವರ
ಸದ್ದಿರದೆ ಬೆಚ್ಚಿಸುವ ಪರಿ
ಹರಿಸಿದೆ ಬೆವರ..,ಕವಿಯ ಲೇಖನಿ !

ಸೊಕ್ಕಿನಿಂದ ಮೆರೆದವರ
ತಗ್ಗಿಸಿ ಮುದುಡಿಸುವ ಹಾರಿ
ಶಕ್ತಿ ಪ್ರದರ್ಶಿಸಿದ ಶೂರ
ಧೈರ್ಯಗೆಡದಂತೆ ಮದವೇರಿ
ಹರಿಸಿದೆ ಬೆವರ..,ಕವಿಯ ಲೇಖನಿ !



Friday, July 05, 2019

ಚುಟುಕು

ಬಿಲ್ಲಿನಿಂದ ಹೂಡಿದ ಬಾಣ..
ನಾಟಲೇಬೇಕೆಂದಿಲ್ಲ..
ನಾಲಿಗೆಯಂಬ ಮಂತ್ರದಂಡ ಸಾಕು.
ಹೃದಯ ಇರಿಯಲು !!

Wednesday, July 03, 2019

ನಮ್ಮ ಧಾರ್ವಾಡ (ಅಂದು - ಇಂದು)



ಅಂದು ಚಂದಿತ್ತು ನಮ್ಮ ಧಾರ್ವಾಡ ನೋಡ್ರಿ
ಊರಾಗ ಓಡ್ತಿತ್ತು ಟಾಂಗಾ ಗಾಡಿ

ಸಿಬಿಟ್ಯಾಗ ಶೇಂಗಾ, ಲಿಂಬುಳಿ, ಹುರಗಡ್ಲಿ
ಹಿಂದೊಂದು ಬಸ್ಸ್ ಬಂತು ಯಾವುದ್ ನೋಡ್ರಿ…?

ಎಂಟರಿಂದ ಒಂಬತ್ತಕ್ಕ ಸಾಲಿ ಹುಡುಗರ ಓಟ
ಬಸ್ ತಪ್ಪಿದರ.., ತಪ್ಪತಿತ್ತು ಮೊದಲ ಪಾಠ

ವಿಜಿಯಾ ಥೇಟರ್ನ್ಯಾಗ ಅಣ್ಣವರ ಪಿಚ್ಚರ್
ಕಾಲೇಜು ಹುಡುಗೂರು ಕ್ಲಾಸಿಗೆ ಚಕ್ಕರ್

ಎನ್.ಟಿ.ಟಿ.ಎಫ್ ಕಲಿಯೋರು ಭಾರಿ ಜೋರು
ನೌಕರಿ ಮಾಡಾಕ ದೇಶಾನ ಬಿಟ್ಟೋರು

ಕೃಷಿ ವಿಶ್ವವಿದ್ಯಾಲಯದಾಗ ಓದೋದೆ ಚಂದ
ಹಸಿರಿನಿಂದ ಕಂಗೊಳಿಸ್ತಿತ್ತು ಅದರ ಅಂದ

ಇಂದೂ ಚಂದೈತಿ  ನಮ್ಮ ಧಾರ್ವಾಡ ನೋಡ್ರಿ
ಸ್ವಲ್ಪ ಹೆಚ್ಚಗಿ ಆಗ್ಯಾವ.., ಈಗ ಮೋಟರ್ ಗಾಡಿ !!








Monday, July 01, 2019

ನಿತ್ಯ ನುಡಿ


ಕಲಿಯಲು ಬೇಕು ಕನ್ನಡ
ಕಲಿತು ಬರಿಯಲೂಬೇಕು ಕನ್ನಡ 

ನುಡಿಯ ಬೇಕು ಕನ್ನಡ
ನುಡಿದು ನಡಿಯಲೂಬೇಕು ಕನ್ನಡ

ಬಳಸ ಬೇಕು ಕನ್ನಡ
ಬಳಸಿ ಬೆಳಸಲೂಬೇಕು ಕನ್ನಡ

ಪೂಜಿಸ ಬೇಕು ಕನ್ನಡ
ಪೂಜಿಸಿ ಆರಾಧಿಸಲೂಬೇಕು ಕನ್ನಡ

ಏರಿಸೋಣ ಬಾರಾ ಕನ್ನಡ ಬಾವುಟ 
ಏರಿಸಿ ಹಾರಿಸಲೂಬೇಕು ಕನ್ನಡ ಭೂಪಟ

ನನ್ನ ಅಭಿಮಾನ ಕನ್ನಡ
ಕರುನಾಡ ಜೀವರಾಶಿಗಳಲೂಬೇಕು ಕನ್ನಡ

ಕನ್ನಡದ ಕೂಗು


ನನ್ನ ಭಾಷೆಯೇ ನಮ್ಮ ನೆಲದಲ್ಲಿ
ಉಳಿವಿಗಾಗಿ ಬಡಿದಾಡುತಿರಲು

ಹುಟ್ಟು ಕನ್ನಡಿಗರೇ ಹೊರೆತು
ಕನ್ನಡಕ್ಕಾಗಿ ದುಡಿದವರಲ್ಲ
ಕನ್ನಡವ ಆದರಿಸುವುದಿಲ್ಲ
ಅಭಿಮಾನವೇ ಇವರಿಗಿಲ್ಲ!

ಹಿಂತವರ ಹೆತ್ತ ನನ್ನ ತಾಯಿನೆಲ
ಏನು ಪಾಪವ ಮಾಡಿದೆ ನಾ ಅರಿಯೆ
ಮಕ್ಕಳೇ ಇವರು..? ಹಿತಶತ್ರುಗಳು..!
ತಾಯ ಋಣವ ತೀರಿಸುವ ಬದಲು
ಅನ್ಯ ಭಾಷೆಯ ಗುಲಾಮರು ?!

ತೊಲಗಲಿ ದುರಹಂಕಾರಿಗಳು
ಮೊಳಗಿಸುವೆ ಕನ್ನಡ ಕಹಳೆಯು
ಕನ್ನಡಕ್ಕಾಗಿಯೇ ಸುರಿಸುವೆ ನನ್ನ ಬೆವರು
ಸಮಯ ಬಂದರೆ ಹರಿಸಬಲ್ಲೇ ನೆತ್ತರನು.
ಕನ್ನಡದ ಊಳಿವಿಗೆ ಅರ್ಪಿಸುವೆ ನನ್ನೇ ನಾನು !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...