ನಮ್ಮ ಅಜ್ಜ ನವಲೂರ ಸಾಲಿ ಮಾಸ್ತರ್. ಅಜ್ಜಾಂದು ನಂದು ಭಾರಿ ನಂಟು. ನನಗ ಸಾಲಿ ಸೂಟಿ ಸುರು ಆತು ಅಂದ್ರ ಮರದಿನಾ ನಾ ಅಜ್ಜಾನ ಊರ ನವಲೂರಿಗೆ ಹೋಗ್ತಿದ್ದೆ. ಅಲ್ಲಿಗೆ ಹೋದ ಮ್ಯಾಲ, ಅವರ ಜೋಡಿನ ಎಲ್ಲಾ, ಆಡುದು, ಓದುದು, ವಾಯುವಿಹಾರಕ್ಕ ಹೋಗುದು, ಉಣ್ಣುದು, ಮಲಗೂದು. ನನ್ನ ಅಜ್ಜ ಲೇ ಸುನಿ, ಬೇಗ ಏಳೋ ಇವತ್ತ ನಾವ್ ಹೊಲದ ಕಡೆ ಹೋಗುಣು ಅಂತ ಕೂಗಿದರೆ ನಂಗ ಎಲ್ಲಿಲದ ಖುಷಿ. ಬಡಾ ಬಡಾನ ಎದ್ದು, ಮುಖ ತೊಳದ, ಜಳಕಾ ಮಾಡಿ ತೈಯಾರ. ಅಜ್ಜಾ ಬೇಗ ನಡಿ ಹೋಗುಣ ಹೊಲಕ್ಕ ಅಂತ ನಾ ಅಂದ್ರ ತಡಿ ಪಾ ನಾಸ್ಟಾ ಮಾಡಿ ಚಾ ಕುಡದ ಹೋಗುಣು ಅಂತಿದ್ದರು. ಸರಿ ಎಲ್ಲಾ ಮುಗಿಸಿ ಅಜ್ಜಾ ಮೊಮ್ಮಗನ ಸವಾರಿ ಹೊರ್ಟರ ಶುರು ನೋಡ್ರಪಾ..., ನಮಸ್ಕಾರೀ ಮಾಸ್ತರ..., ಮುಂಜಾಲೆನೆ ಎಲ್ಲಿಗ ಹೊಂಟ್ರಿ.., ಮೊಮ್ಮಗಾ ಬಂದಾನ ಹಂಗ ಹೊಲದ್ ಕಡೆ ಹೋಗ ಬರ್ತೀನಿ. ಬರ್ರಿ ಬರ್ರಿ ಹೋಗಬರ್ರಿ..ಇನ್ನ ಎರಡು ಹೆಜ್ಜಿ ಇಟ್ಟರಲಿಲ್ಲ ..ಶರಣರೀ ಮಾಸ್ತರ್.., ಚಾಹಾ ಆತರೀ ?? ಅಂತ ಒಬ್ಬ ಅಜ್ಜಿ ಮಾತನಾಡಿಸಿದರು. ಹೂನ್ವಾ...ಈಗ ಇನೈದ ಆತ ನೋಡ, ಸ್ವಲ್ಪ ಹೊಲಕ್ಕ ಹೋಗಬರ್ತೀನಿ..ಅಂದರು. ನವಲೂರು ವ್ಯಾಯಾಮ ಸಾಲಿ ಮುಂದ ಪೈಲ್ವಾನರು ನಮಸ್ಕಾರ ಮಾಸ್ತರ ಅಂದ್ರು...ಓಹೋ ಪೈಲವಾನ ಅರಾಮೇನರ್ಪಾ...? ಎಲ್ಲಾರೂ ವ್ಯಾಯಾಮ ಮುಗಿಸೇ ಕುಂತಿರೇನು ಅಂದ್ರು.. ಹೂನ್ರೀ ಅಂದ್ರು. ಮನಿಯಿಂದ ಅಗಸಿ ದಾಟಿ ಹೊಲದ ರಸ್ತೆ ಹಿಡಿಯು ಮಟ ಇಷ್ಟೊಂದು ಮಂದಿ ನಮ್ಮ ಅಜ್ಜಾಗ ಹೆಂಗ ಗೊತ್ತ ಅದಾರ....? ಅಜ್ಜಾ ನಿಂಗ ಈಸ್ ಮಂದಿ ಹೆಂಗ ಗೊತ್ತ ಅದಾರ...? ನಮ್ಮ ಸಾಲ್ಯಾಗ ಇವರ ಮಕ್ಕಳು ಕಲಿತಾರ, ಇವರು ಸಾಲಿಗೆ ಹಚ್ಚಾಕ ಬರ್ತಾರ ಅದಕ್ಕ ತಿಳಿದಿರ್ತಾರ. ಹಿಂಗ ನಾವು ಹೊಲ ಮುಟ್ಟೋತನಕಾ ಸಿಕ್ಕವರು ಬಹಳ ಮಂದಿ...., ನನ್ನ ಅಜ್ಜಾ ಭಾರಿ ಫೇಮಸ್ ಅಂತ ನನಗ ಆಶ್ಚರ್ಯ ಹಾಗು ಖುಷಿ.
ಮತ್ತೋಂದು ದಿನಚರಿಯೊಂದಿಗೆ ಭೇಟಿಯಾಗೋಣ...
2 comments:
ಭಾಷೆಯ ಬಳಕೆ ಮತ್ತು ಸುಲಲಿತ ಶೈಲಿಗೆ ೧೦/೧೦.
ತುಂಬಾ ಧನ್ಯವಾದಗಳು ಸರ್ :)
Post a Comment